ಬಾರ್ಬೆಡೋಸ್		
ವೆಸ್ಟ್ ಇಂಡೀಸ್ ದ್ವೀಪ ಸಮೂಹದಲ್ಲಿ ಅತ್ಯಂತ ಪೂರ್ವಕ್ಕಿರುವ ಸ್ವತಂತ್ರದ್ವೀಪ. ವೆಜಿಜ್ವೇಲಕ್ಕೆ ಈಶಾನ್ಯದಲ್ಲಿ ಸುಮಾರು 402 ಕಿ.ಮೀ. ದೂರದಲ್ಲೂ ಸೇಂಟ್ ವಿನ್ಸೆಂಟ್ ದ್ವೀಪದ ಪೂರ್ವಕ್ಕೆ ಸುಮಾರು 160 ಕಿಮೀ ದೂರದಲ್ಲೂ ಇದೆ. ತ್ರಿಕೋನಾಕೃತಿಯಲ್ಲಿರುವ ಈ ದ್ವೀಪ ಉತ್ತರ ದಕ್ಷಿಣವಾಗಿ 34 ಕಿಮೀ, ಪೂರ್ವ ಪಶ್ಚಿಮವಾಗಿ 23 ಕಿಮೀ ಇದೆ. ಒಟ್ಟು ವಿಸ್ತೀರ್ಣ 431 ಚ.ಕಿಮೀ. ಜನಸಂಖ್ಯೆ 2,90,000 (1981). ಬ್ರಿಡ್ಜ್‍ಟೌನ್ ಇದರ ರಾಜಧಾನಿ ಹಾಗೂ ಏಕೈಕ ಬಂದರು ಜನಸಂಖ್ಯೆ 8789 (1975).

ಈ ದ್ವೀಪ ಕಣಶಿಲೆಗಳಿಂದ ಕೂಡಿದ್ದು ಸುಮಾರು 70 ದಶಲಕ್ಷ ವರ್ಷಗಳಿಗೂ ಪ್ರಾಚೀನವಾದ ಜೇಡುಶಿಲೆ, ಮರಳು ಶಿಲೆ ಮತ್ತು ಕಾಂಗೋ ಮರೇಜ್ ಶಿಲೆಗಳಿಂದ ಕೂಡಿದೆ. ಸುಣ್ಣಕಲ್ಲುಗಳ ಸಂಚಯದ ಮೇಲೆ ಸುಮಾರು 92 ಮೀಟರ್ ದಪ್ಪವಾದ ಹವಳ ಪದರ ಆವೃತವಾಗಿದೆ. ದ್ವೀಪದ ಅತ್ಯಂತ ಎತ್ತರ ಪ್ರದೇಶ ಹಿಲಬೀ ಶಿಖರ (340 ಮೀ). ಪಶ್ಚಿಮದ ಭೂಭಾಗ ಅಸಮ ಇಳಿಜಾರಿನ ಹಸಿರು ಮೈದಾನ. ಹಿಲಬೀ ಶಿಖರದ ಭಾಗ ಕಡಿದಾದ ಇಳಿಜಾರಿನಿಂದ ಕೂಡಿದ್ದು ಸೇಂಟ್ ಜಾರ್ಜ್ ನದಿ ಕಣಿವೆಯ ವಿಶಾಲ ಪ್ರದೇಶದಲ್ಲಿ ಕೊನೆಗೊಳ್ಳುತ್ತದೆ.

ಬಾರ್ಬೆಡೋಸ್‍ನಲ್ಲಿ ಆಹ್ಲಾದಕರ ವಾಯುಗುಣವಿದೆ. ಉಷ್ಣತೆ ಸಾಮಾನ್ಯವಾಗಿ 210-310 ಸೆ. ಡಿಸೆಂಬರ್‍ನಿಂದ ಮೇ ತನಕ ಶುಷ್ಕ ಹವೆ. ಉಳಿದ ಭಾಗ ಶೀತ ಹವಾಗುಣದಿಂದ ಕೂಡಿರುತ್ತದೆ. ಚಿಕ್ಕ ದ್ವೀಪವಾದರೂ ಮಳೆಯ ಹಂಚಿಕೆಯಲ್ಲಿ ಅಸಮತೆ ಕಂಡುಬರುತ್ತದೆ. ಉತ್ತರದಲ್ಲಿ ವಾರ್ಷಿಕ 200 ಸೆಂಮೀ ಮಳೆಯಾದರೆ ದಕ್ಷಿಣದಲ್ಲಿ 100-150 ಸೆಂ.ಮೀ. ಈ ದ್ವೀಪದ ಮೇಲೆ ಚಂಡಮಾರುತ ಬೀಸಿಹೋಗುವುದುಂಟು. 1780, 1831 ಮತ್ತು 1955ರಲ್ಲಿ ಚಂಡಮಾರುತದ ಹಾವಳಿಯಿಂದ ಕಷ್ಟನಷ್ಟಕ್ಕೆ ಗುರಿಯಾಗಿತ್ತು. ಸುಮಾರು 17 ಹೆಕ್ಟೇರುಗಳಲ್ಲಿ ಮಾತ್ರ ಸ್ವಾಭಾವಿಕ ಸಸ್ಯವರ್ಗವನ್ನೊಳಗೊಂಡ ಕಾಡಿದೆ. ದ್ವೀಪದ ಉತ್ತರಭಾಗದಲ್ಲಿ ನಿತ್ಯಹರಿದ್ವರ್ಣ ಸಸ್ಯವರ್ಗವಿದೆ. ಒಟ್ಟು ಭೂಮಿಯ ಶೇಕಡಾ 85 ಭಾಗವನ್ನು ತೋಟಗಾರಿಕೆ ಮತ್ತು ಉಳುಮೆಗೆ ಬಳಸಬಹುದಾಗಿದೆ. ದ್ವೀಪದಲ್ಲಿ ಮಹಾಗನಿ, ಹುಣಿಸೆ, ತಾಳೆ ದೀವಿ ಹಲಸು, ಸರ್ವೇಮರ, ನೀರುಕಾಯಿ ಮರ, ಗುಲ್‍ಮೊಹರ್ ಮತ್ತು ದೇವಕಣಿಗಲೆ ಮರಗಳಿವೆ. ವನ್ಯಮೃಗಗಳಲ್ಲಿ ಕೋತಿ, ಮೊಲ, ಕೀರ ಮುಂತಾದ ಪ್ರಾಣಿಗಳೂ ಪಾರಿವಾಳ, ಗುಬ್ಬಚ್ಚಿ ಮುಂತಾದ ಪಕ್ಷಿಗಳು ಇವೆ.

ದ್ವೀಪದ ಸುಮಾರು 4/5ರಷ್ಟು ಕೃಷಿಭೂಮಿ ದೊಡ್ಡ ಹಿಡುವಳಿದಾರರ ವಶದಲ್ಲಿದೆ. ಸಾಮಾನ್ಯವಾಗಿ ಗೇಣಿದಾರರು ಸ್ಥಳೀಯವಾಗಿ ಚ್ಯಾಟಲ್‍ಗಳೆಂದು ಕರೆಯುವ ಮರದ ಪುಟ್ಟ ಮನೆಗಳಲ್ಲಿ ದೊಡ್ಡ ಹಿಡುವಳಿಯ ಅಂಚಿನಲ್ಲಿ ಗುಂಪಾಗಿ ವಾಸಿಸುತ್ತಾರೆ. ಗೇಣಿದಾರರಲ್ಲಿ ಒಬ್ಬರಿಂದೊಬ್ಬರಿಗೆ ಇವನ್ನು ವರ್ಗಾಯಿಸಬಹುದು ಅಥವಾ ಸ್ಥಳಾಂತರಿಸಬಹುದು. ಕೆಲವು ವಿದ್ಯುತ್ ದೀಪ ಮತ್ತು ಕೊಳವೆ ಬಾವಿಗಳ ಅನುಕೂಲ ಪಡೆದಿರುತ್ತವೆ. ದನ, ಕುರಿ, ಆಡುಗಳ ಸಾಕಣೆಯುಂಟು. ಗ್ರಾಮಗಳಲ್ಲಿ ಸಾಮಾನ್ಯವಾಗಿ ಕಲ್ಲಿನ ಮನೆಗಳನ್ನು ಉದ್ದಕ್ಕೂ ಸಾಲಾಗಿ ಕಟ್ಟಿರುತ್ತಾರೆ.

ಸಕ್ಕರೆ ಮತ್ತು ಅದರ ಉಪ ವಸ್ತುಗಳು ಈ ದ್ವೀಪದಿಂದ ರಫ್ತಾಗುವ ಪದಾರ್ಥಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಭಾಗವನ್ನು ಒಳಗೊಂಡಿವೆ. ಒಟ್ಟು ವ್ಯವಸಾಯ ಭೂಮಿಯಲ್ಲಿ ಶೇಕಡಾ 70 ಭಾಗದಲ್ಲಿ ಕಬ್ಬು ಬೆಳೆಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಸಲುವಾಗಿ ಆರ್ಥಿಕ ವ್ಯವಸ್ಥೆಯಲ್ಲಿ ವೈವಿಧ್ಯ ತರಲಾಗುತ್ತಿದೆ. ಮೀನುಗಾರಿಕೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಲಾಗುತ್ತಿದೆ. ಸ್ಥಳೀಯ ಗುಡಿ ಕೈಗಾರಿಕೆಗಳು ಸೇರಿದಂತೆ ಆಹಾರ ಸಂಸ್ಕರಣೆ, ಗಿರಣಿಗಳು, ಗಾಜು ಹಾಗೂ ಮರಮುಟ್ಟು ಸಾಮಾನುಗಳ ತಯಾರಿಕೆ ಮುಂತಾದ ಸಣ್ಣ ಕೈಗಾರಿಕೆಗಳು ಬೆಳೆಯುತ್ತಿವೆ. ಇತ್ತೀಚೆಗೆ ಪ್ರವಾಸೋದ್ಯಮ ಹೆಚ್ಚು ಆರ್ಥಿಕ ಬದಲಾವಣೆ ತರುವಷ್ಟು ಪ್ರಬುದ್ಧಮಾನವಾಗಿ ಬೆಳೆಯುತ್ತಿದೆ. 1968ರಿಂದೀಚೆಗೆ ಸಕ್ಕರೆ ಆದಾಯಕ್ಕಿಂತ ಹೆಚ್ಚಿನ ವಿದೇಶಿ ವಿನಿಮಯವನ್ನು ಪ್ರವಾಸೋದ್ಯಮ ತಂದಿದೆ. ಅನೇಕ ಹೊಸ ಹೋಟೆಲ್ ಮತ್ತು ವಸತಿ ಗೃಹಗಳು ಬೆಳೆದು ಇಲ್ಲಿಯ ಭೂಮಿ ಬೆಲೆ ಅಧಿಕಗೊಂಡಿದೆ. ಸಕ್ಕರೆ ಕೈಗಾರಿಕೆ ಬಂಡವಾಳದ ಅಭಾವ, ರೈತರ ಆಲಸ್ಯ, ಯಂತ್ರೋಪಕರಣಗಳ ಅಭಾವದಿಂದ ಹೆಚ್ಚು ಕುಂಠಿತಗೊಂಡಿದೆ. ಜೀವನ ಸ್ಥಿತಿ ಬೆಲೆಗಳ ಹೆಚ್ಚಳ ಮತ್ತು ರಾಷ್ಟ್ರೀಯ ಸಾಲದ ಹೊರೆಗಳಿಂದ ದುಸ್ಥಿತಿಗೆ ಇಳಿದಿದೆ. ಆಮದು ಮತ್ತು ರಫ್ತು ಕೇವಲ ಬ್ರಿಟನ್, ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಕೆನಡಾಗಳೊಡನೆ ನಡೆಯುತ್ತಿದೆ. ಈ ದ್ವೀಪ ಒಳ್ಳೆಯ ರಸ್ತೆ ಜಾಲಗಳಿಂದ ಕೂಡಿದೆ. ಬ್ರಿಡ್ಜ್‍ಟೌನ್ ಆಳವಾದ ಸ್ವಾಭಾವಿಕ ಬಂದರು. ಅಂತರರಾಷ್ಟ್ರೀಯ ಮತ್ತು ಬ್ರಿಟಿಷ್ ವೆಸ್ಟ್ ಇಂಡಿಯನ್ ವಾಯು ಮಾರ್ಗಗಳು ದ್ವೀಪದ ದಕ್ಷಿಣ ತೀರದಲ್ಲಿರುವ ಸೀವೆಲ್ ವಾಯುನಿಲ್ದಾಣವನ್ನು ಸಂಧಿಸುತ್ತವೆ. ಪೂರ್ವ ಕೆರಿಬಿಯನ್ ಮೀನುಗಾರಿಕೆ ಕೇಂದ್ರ ಮತ್ತು-ನೌಕಾ ಸಂಸ್ಥೆಯ ಅಂಚೆ ಮತ್ತು ತಂತಿ ಕೇಂದ್ರ ಈ ದ್ವೀಪದಲ್ಲಿದೆ.

ಬ್ರಿಟನ್ನಿನ ರಾಣಿ ಈ ದ್ವೀಪದ ಮುಖ್ಯಾಧಿಕಾರಿಣಿ. ಆಡಳಿತ ನಿರ್ವಹಣೆಗಾಗಿ ಬ್ರಿಟನ್ನಿನ ಪ್ರತಿನಿಧಿಯಾಗಿ ಒಬ್ಬ ಗೌವರ್ನರ್ ಜನರಲ್‍ನನ್ನು ನೇಮಿಸಿದ್ದು ಅವನು ದ್ವೀಪದ ಮಂತ್ರಿಮಂಡಲದ ಆದೇಶದಂತೆ ನಡೆಯುತ್ತಾನೆ. ಸೆನೆಟಿಗೆ ಗೌವರ್ನರ್ ನೇಮಿಸುವ 21 ಮಂದಿ ಸದಸ್ಯರಲ್ಲಿ 12 ಮಂದಿ ಪ್ರಧಾನ ಮಂತ್ರಿಯಿಂದ ಸೂಚಿಸಿದವರಾಗಿರುತ್ತಾರೆ. 18 ವರ್ಷ ತುಂಬಿದವರಿಗೆ ಮತ ಚಲಾಯಿಸುವ ಹಕ್ಕುಂಟು. ವಿಧಾನ ಮಂಡಲಕ್ಕೆ 24 ಮಂದಿ ಚುನಾಯಿತ ಸದಸ್ಯರಿರುತ್ತಾರೆ. ಪ್ರಧಾನಿಯಿಂದ ಕೂಡಿದ ಮಂತ್ರಿಮಂಡಲ, ಶ್ರೇಷ್ಠ ನ್ಯಾಯಸ್ಥಾನ ಮತ್ತು ಪ್ರಿವಿ ಕೌನ್ಸಿಲ್‍ಗಳು ಇಲ್ಲಿವೆ.

ರಾಜಕೀಯ ನಿಯಂತ್ರಣ ಕರಿಯರ ಕೈಲಿದೆ. ಸಾಮಾಜಿಕವಾಗಿ ಇಲ್ಲಿ ಅನೇಕ ಪಂಗಡಗಳಿವೆ. ಬಿಳಿಯರಲ್ಲಿ ಪ್ಲಾಂಟರ್‍ಗಳು, ವ್ಯಾಪಾರಿಗಳು, ವೈದ್ಯರು, ತಂತ್ರಜ್ಞರು, ಹೊಟೆಲ್ ಮಾಲೀಕರು ಮುಂತಾದವರಿದ್ದಾರೆ. ಗಣನೀಯ ಪ್ರಮಾಣದಲ್ಲಿ ಮಧ್ಯಮ ದರ್ಜೆ ವೈದ್ಯರು, ವಕೀಲರು, ಶಿಕ್ಷಕರು ಮತ್ತು ಸರ್ಕಾರಿ ನೌಕರರು ಇದ್ದಾರೆ. ಉದ್ಯೋಗಸ್ಥರಲ್ಲಿ ಒಟ್ಟು ಜನಸಂಖ್ಯೆಯ ಶೇಕಡಾ 80 ರಷ್ಟು ಕಪ್ಪು ವರ್ಣೀಯರು. ಆರ್ಥಿಕ ಆದಾಯ ವಿಶೇಷವಾಗಿ ವಿದೇಶಿಯ ಬಿಳಿಮಂದಿಯವರಲ್ಲಿ ಕೇಂದ್ರೀಕೃತವಾಗಿದೆ. ಆರ್ಥಿಕಾಭಿವೃದ್ಧಿ ಹೆಚ್ಚಾಗಿ ಸಕ್ಕರೆ ಕೈಗಾರಿಕೆ ಮತ್ತು ಪ್ರವಾಸೋದ್ಯಮವನ್ನು ಅವಲಂಬಿಸಿವೆ.

ಬ್ರಿಟಿಷರು 1625ರಲ್ಲಿ ಈ ದ್ವೀಪಕ್ಕೆ ಹೆಜ್ಜೆ ಇಟ್ಟು 1627ರಿಂದ ಅಲ್ಲಿ ನೆಲೆಸಲಾರಂಭಿಸಿದರು. 1639ರಲ್ಲಿ ದ್ವೀಪದ ಜಮೀನ್ದಾರರುಗಳು ಮತ್ತು ನೆಲದೊಡೆಯರು ಚುನಾಯಿತ ಶಾಸನ ಸಭೆಯನ್ನು ಜಾರಿಗೆ ತಂದರು. 1652ರಲ್ಲಿ ಬ್ರಿಟಿಷ್ ಶಾಸನ ಸಭೆ ದ್ವೀಪದ ಸ್ವಾಧೀನ ಪಡೆಯಲು ಒಂದು ದಂಡವನ್ನು ಕಳುಹಿಸಿತು. ದ್ವೀಪದ ಅಭಿವೃದ್ಧಿಯಿಂದಾಗಿ 1700 ರಿಂದ 1800ರಲ್ಲಿ ಅನೇಕ ಇಂಗ್ಲಿಷ್ ಕುಟುಂಬಗಳು ಬಂದು ನೆಲಸಿದುವು. 1834ರಲ್ಲಿ ಗುಲಾಮ ಪದ್ಧತಿಯನ್ನು ರದ್ದುಗೊಳಿಸಲಾಯಿತು. 1958ರಲ್ಲಿ ವೆಸ್ಟ್ ಇಂಡೀಸ್ ಫೆಡರೇಷನ್‍ಗೆ ಸೇರಿಕೊಂಡಿತು. ಆದರ ಎಜಮೈಕ, ಟ್ರೆನಿಡಾಡ್ ಮತ್ತು ಟೊಬಾಗೊ 1962ರಲ್ಲಿ ಸ್ವತಂತ್ರವಾಗಿ ಈ ಒಕ್ಕೂಟ ಒಡೆಯಿತು. ಬಾರ್ಬೆಡೋಸ್ 1966 ನವೆಂಬರ್ 30ರಂದು ಸ್ವತಂತ್ರವಾಗಿ ಕಾಮನ್‍ವೆಲ್ತ್ ರಾಷ್ಟ್ರಗಳ ಸದಸ್ಯತ್ವವನ್ನೂ 1966 ಡಿಸೆಂಬರ್ 9ರಂದು ವಿಶ್ವಸಂಸ್ಥೆಯ ಸದಸ್ಯತ್ವವನ್ನೂ ಪಡೆಯಿತು. (ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ